ನೂಲುವಿಕೆ -
	ಬಟ್ಟೆ ನೇಯಲು ಅನುಕೂಲವಾಗುವಂತೆ ತುಂಡಾದ ಎಳೆಗಳನ್ನು ಹೊಸೆದು ಉದ್ದ ದಾರವನ್ನು ಮಾಡುವ ಪ್ರಕ್ರಿಯೆ. (ಸ್ಪಿನ್ನಿಂಗ್).

	ಇತಿಹಾಸ: ದಾರದಿಂದ ಬಟ್ಟೆಯನ್ನು ತಯಾರಿಸುವ ಮುನ್ನ ಎಳೆಗಳಿಂದ ಹೇಗೆ ದಾರ ಹೊಸಯುವುದು ಎಂಬುದನ್ನು ಮಾನವ ತಿಳಿಯುವುದು ಆವಶ್ಯಕವಾಗಿತ್ತು. ಸುಮಾರು 25 ಸಾವಿರ ವರ್ಷಗಳ ಹಿಂದೆ ಶಿಲಾಯುಗದ ಮಾನವನಿಗೆ ನೂಲುವಿಕೆ ಅತಿ ಮುಖ್ಯವಾದ ಪರಿಶೋಧನೆಗಳಲ್ಲಿ ಒಂದಾಗಿತ್ತೆಂದು ಹೇಳಬಹುದು. ಪ್ರಾಣಿಗಳ ತೊಗಲನ್ನು ಮಾನವ ಬಟ್ಟೆಯಂತೆ ಧರಿಸಿ ಗುಹೆಗಳಲ್ಲಿ ವಾಸಿಸುವುದನ್ನು ಬಿಟ್ಟ ಬಹಳ ಕಾಲದ ಬಳಿಕ ದಕ್ಷಿಣ ಯೂರೋಪಿನ ಭಾಗಗಳಲ್ಲಿ ವಾಸಿಸುತ್ತಿದ್ದ ಸ್ವಸ್ ಕೊಳದ ನಿವಾಸಿಗಳು ಎಂಬ ಒಂದು ಜನಾಂಗಕ್ಕೆ ಸೇರಿದ್ದ ಜನ ನೂಲುವುದು, ನೇಯುವುದು ಮತ್ತು ಸೆಣಬನ್ನು ಕೃಷಿ ಮಾಡುವುದು ಮುಂತಾದವನ್ನು ಕಲಿತಿದ್ದರೆಂದು ಗೊತ್ತಾಗಿದೆ. ಇದಕ್ಕಾಗಿ ಅವರು ಏಷ್ಯಾದಿಂದ ತಂದಿದ್ದ ಸಾಕು ಕುರಿಯ ತುಪ್ಪಟವನ್ನು ಉಪಯೋಗಿಸಿದ್ದರೆಂದೂ ತಿಳಿದು ಬರುವುದು.

	ಪ್ರಾಚೀನ ಮಾನವ ಮೊದಲು ಸಣ್ಣ ಸಣ್ಣ ಎಳೆಗಳನ್ನು ಮೀನು ಹಿಡಿಯುವ ಬಲೆಗಳಿಗಾಗಿ ಉಪಯೋಗಿಸುತ್ತಿದ್ದು, ಈ ಗಟ್ಟದಿಂದ ಬಟ್ಟೆಗಳನ್ನು ತಯಾರಿಸಲು ಕೂಡ ಅವನ್ನೇ ಏಕೆ ಉಪಯೋಗಿಸಬಾರದು ಎನ್ನುವ ಆಲೋಚನೆ ಹೊಳೆದು ಅದರಂತೆ ತನ್ನ ಅವಶ್ಯಕತೆಗಳನ್ನು ಪೂರೈಸತೊಡಗಿದ. ಬಲು ಹೆಚ್ಚು ಹುರಿಯುಳ್ಳ ಹಗ್ಗಗಳನ್ನೂ ಕಡಿಮೆ ಹುರಿಯ ನೂಲನ್ನು ತಯಾರಿಸಿ ಬಟ್ಟೆ ನೇಯಬಹುದು ಎನ್ನುವ ಜ್ಞಾನ ಅವನಿಗೆ ಅನಂತರ ಹೊಳೆದಿರಬೇಕು ಇದಕ್ಕಾಗಿ ಮೊದಮೊದಲು ಅತಿ ಉದ್ದವಾದ ಎಳೆಗಳನ್ನೇ ಉಪಯೋಗಿಸಲಾಗುತ್ತಿತ್ತು. ಇಂದಿಗೆ ಸುಮಾರು ಹತ್ತು ಸಾವಿರ ವರ್ಷಗಳಿಂದೀಚೆಗೆ ಮಾನವ ನೂಲುವ ಯಂತ್ರಗಳ ಬಗ್ಗೆ ಪರಿಶೋಧನೆ ಪ್ರಾರಂಭಿಸಿದರೂ ಮೊತ್ತಮೊದಲು ನೂಲುವಿಕೆ ಎಲ್ಲಿ ಮತ್ತು ಯಾವಾಗ ಪ್ರಾರಂಭವಾಯಿತು ಎನ್ನುವುದು ಸರಿಯಾಗಿ ತಿಳಿಯದು. ಅಂತೂ ನೂಲುವಿಕೆ ಚಾರಿತ್ರಿಕವಾಗಿ ತಿಳಿದಿರುವುದಕ್ಕಿಂತಲೂ ಬಲು ಪುರಾತನವಾಗಿದೆ,. ಮಾನವ, ತನ್ನ ವೈಯಕ್ತಿಕ ರಕ್ಷಣೆಗೆ ತನ್ನದೇ ಆದ ಒಂದು ಗುಂಪನ್ನು ಏರ್ಪಡಿಸಿಕೊಂಡು ಸಾಮಾಜಿಕ ವ್ಯಕ್ತಿಯಾಗಿ ತನ್ನನ್ನು ರೂಪಿಸಿಕೊಳ್ಳುವುದಕ್ಕಿಂತ ಮುಂಚೆಯೇ ಬಹುಷಃ ಈ ನೂಲುವಿಕೆ ಪ್ರಾರಂಭವಾಯಿತು ಎನ್ನಬಹುದು.
ಮೊತ್ತಮೊದಲು ಮಾನವ ಹೀರಿಕೆ ಗುಣವುಳ್ಳ ಹತ್ತಿಯ ಜೊತೆ, ಕಿತ್ತಾನಾರು ಅಥವಾ ಉಣ್ಣೆ ಎಳೆಗಳನ್ನು ನೂಲಲು ಪ್ರಾರಂಭಿಸಿದ ಎಂಬುದರ ಬಗ್ಗೆ ಸಂದೇಹವಿಲ್ಲ. ಕಾಳ ಮುಂದುವರಿದಂತೆ  ಈ ಕೆಲಸವನ್ನು ಸುಲಭವಾಗಿಸಲು  ಬೇಕಾಗುವ ಉಪಕರಣಗಳು ಕಂಡುಹಿಡಿಯಲ್ಪಟ್ಟವು. ಇವುಗಳಲ್ಲಿ ಮೊತ್ತಮೊದಲನೆಯದೆಂದರೆ, ಬಹುಷಃ ಕದಿರು ಮತ್ತು ಅದರ ಜೊತೆಗೇ ಬೇಕಾಗಿದ್ದ ನೂಲುಕಡ್ಡಿ ಉಪಕರಣ. ನೂಲು ಕಡ್ಡಿಯ ತುದಿಗೆ ಬಿಡಿ ಎಳೆಗಳನ್ನು ಪೋಣಿಸಿ ಅದನ್ನು ಎಡ ಕಂಕುಳಲ್ಲಿ ಸಿಕ್ಕಿಸಿಕೊಳ್ಳುತ್ತಿದ್ದರು.

ಚಿತ್ರ-1

 
ಕದಿರು ಸುಮಾರು 30 ಸೆಂ.ಮೀ. ಉದ್ದವುಳ್ಳ ಸಣ್ಣ ಕಡ್ಡಿ. ಅದರ ಒಂದು ತುದಿ ಮೊಂಡಾಗಿಯೂ ಮತ್ತೊಂದು ತುದಿ ಮೊನಚಾಗಿಯೂ ಇರುತ್ತಿತ್ತು. ಒಂದು ತುದಿಯಲ್ಲಿ ಜೇಡಿ ಮಣ್ಣಿನಿಂದ ಮಾಡಿದ ರಾಟೆಉಂಟು. ನೂಲುವವರು ಈ ತಕಲಿಯ ಕದಿರಿನ ಕೊಕ್ಕೆಗೆ ಎಳೆಗಳನ್ನು ಸಿಕ್ಕಿಸಿ ರಾಟೆಯನ್ನು ತಿರುಗಿಸಿ ತಕಲಿಯ ಕೆಳಕ್ಕೆ ಎಳೆಯುವಂತೆ ಕೈಯಿಂದ ತಿರುಗಿಸುತ್ತಿದ್ದರು. ಆಗ ಎಳೆಗಳು ಪರಸ್ಪರ ಸೇರಿ ಎಳೆಯಲ್ಪಟ್ಟು ನೂಲುವ ಕ್ರಿಯೆಗೆ ಒಳಪಡುತ್ತಿದ್ದವು. ಹೀಗೆ ಕದಿರು ಕೆಳಗೆ ಬರುತ್ತಿದ್ದಾಗ ತಮ್ಮ ಬೆರಳುಗಳಿಂದ ಎಳೆಗಳ ಎಳೆಯುವಿಕೆಗೆ ಸಹಾಯ ಮಾಡುತ್ತಿದ್ದರು. ತಿರುಗುತ್ತಿರುವ ಕದಿರು ನೂಲಿಗೆ ಹುರಿಯನ್ನು ಕೊಟ್ಟು, ಗಟ್ಟಿಯಾದ ನೂಲನ್ನು ಉತ್ಪತ್ತಿ ಮಾಡುತ್ತಿತ್ತು. ಕದಿರು ಈ ರೀತಿ ನೆಲದ ವರೆಗೆ ಬಂದಾಗ ನೂಲುವವರು ದಾರವನ್ನು ಕದಿರಿನ ಬುಡದಲ್ಲಿ ಸುತ್ತಿ ಮತ್ತೆ ದಾರದ ಮುಂದಿನ ತುದಿಯನ್ನು ಕೊಕ್ಕೆಗೆ ಸಿಕ್ಕಿಸಿ ಮತ್ತೆ ಇದೇ ರೀತಿ ನೂಲುತ್ತಿದ್ದರು. ಈ ರೀತಿಯ ಕೈನೂಲುವಿಕೆ ಹೀಗೆ ವಿಶಿಷ್ಟ ತೆರನಾಗಿ ಶ್ರಮದಾಯಕ ಮತ್ತು ನಿಧಾನ ಕ್ರಿಯೆ ಎಂಬಂತೆ ಕಂಡರೂ ಈ ಪದ್ಧತಿಯಲ್ಲಿಯ ಕೆಲವು ವಿಶೇಷತೆಗಳನ್ನು ಆಧುನಿಕ ಯಂತ್ರೋಪಕರಣಗಳ ಯಾವ ಸುಧಾರಣೆಗಳೂ ಸರಿಗಟ್ಟಿಲ್ಲ. ಉದಾಹರಣೆಗೆ ಭಾರತದಲ್ಲಿ 17ನೇ ಶತಮಾನದಲ್ಲಿ ತಯಾರಿಸಲಾಗಿತ್ತಿದ್ದ ಡಾಕಾ ಮಸ್ಲಿನ್ ಬಟ್ಟೆಗೊಸ್ಕರ ಒಂದು ಕಿಲೋಗ್ರಾಂ ಕಚ್ಚಾ ಹತ್ತಿಯಿಂದ ಸುಮಾರು 900 ಕಿ.ಮೀ. ಉದ್ದ ದಾರವನ್ನು ನೂಲಲಾಗುತ್ತಿತೆಂದು ತಿಳಿದುಬರುತ್ತದೆ. 

ಚಿತ್ರ-2

 
ಯಾಂತ್ರಿಕ ಸುಧಾರಣೆ: 15ನೇ ಶತಮಾನದ ಸುಮಾರಿಗೆ ಜೇರ್ಸಿ ಕೈಚಕ್ರವು 16ನೇ ಶತಮಾನದಲ್ಲಿ ಸ್ಯಾಕ್ಸೋನಿ ಚಕ್ರವು ಉಪಜ್ಞಿಸಲ್ಪಟ್ಟವು. ಜೆರ್ಸಿ ಕಥೈ ಚಕ್ರ ಈಗಿನ ಕೈ ರಾಟೆಯಂತಿತ್ತು ಇದರಲ್ಲಿ ದಾರವನ್ನು ಒಂದೇ ಸಮವಾಗಿ ನೂಲಲಾಗುತ್ತಿರಲಿಲ್ಲ. ಆದರೆ, ಸ್ಯಾಕ್ಸೋನಿ ಚಕ್ರದಲ್ಲಿ ಇದು ಸಾಧ್ಯವಿತ್ತು. ಇದರಲ್ಲಿ ಹುರಿಯನ್ನು ಕೊಡಲು ಪ್ಲೈಯರ್ ಎಂಬ ಭಾಗವೂ ಚಕ್ರವನ್ನು ತಿರುಗಿಸಲು ಸಲಕರಣೆಯೂ ಇದ್ದುವು. ಇಲ್ಲಿ ತತ್ವಶಃ ಕದಿರನ್ನಿ ತಿರುಗಿಸಿ ಹುರಿಮಾಡಿದ ದಾರವನ್ನು ಯಾಂತ್ರಿಕವಾಗಿ ಸುತ್ತುವುದೇ ಆಗಿದೆ.  

ಚಿತ್ರ-3

n-ಆಕಾರದ ಪ್ಲೈಯರಿನ ಒಳಗಡೆ ಚೌಕಟ್ಟಿನಲ್ಲಿ ಹಾರಿಜವಾಗಿ (ಹಾರಿಸಾಂಟಲಿ) ಕದಿರನ್ನು ಹಿಡಿದುಕೊಳ್ಳಲಾಗುತ್ತಿತ್ತು. ನೂಲುಕಡ್ಡಿಯಿಂದ ಎಳೆಗಳು ಕದಿರಿನ ಕಣ್ಣಿನ ಮುಖಾಂತರ ಒದಗಿ ಇಲ್ಲಂದ ದಾರ ಪ್ಲೈಯರ್ ಮುಖಾಂತರ ಹೊರಟು ಕೊನೆಗೆ ಕಂಡಿಕೆಯ ಮೇಲೆ ಸುತ್ತಲ್ಪಡುತ್ತದೆ. 

ಚಿತ್ರ-4

ಕದಿರು ಮತ್ತು ಕಂಡಿಕೆಗಳೆರಡನ್ನೂ ಪ್ರತ್ಯೇಕ ದಾರಭಂದಗಳಿಂದ ನಡೆಸಲಾಗುತ್ತಿತ್ತು. ಇವು ಬೇರೆ ಬೇರೆ ವೇಗಗಳಲ್ಲಿ ತಿರುಗುತ್ತಿದ್ದರಿಂದ  ಹುರಿ ಮಾಡಿದ ದಾರ ಸುತ್ತಿಕೊಳ್ಳಲು ಸಾಧ್ಯವಾಗುತ್ತಿತ್ತು.
ಈ ಯಂತ್ರಗಳಲ್ಲಿ ಸೆಣಬು, ಉಣ್ಣೆಯಂಥ ಉದ್ದ ಎಳೆಗಳಿಂದಲೇ ಹೊರತು ರತ್ತಿಯಮತ ಮೋಟಾದ ಎಳೆಗಳಿಂದ ದಾರ ತಯಾರಿಕೆ ಸಾಧ್ಯವಾಗುತ್ತಿರಲಿಲ್ಲ. ಹತ್ತಿಯನ್ನು ನೂಲಲು ಜೆರ್ಸಿ ಯಂತ್ರವನ್ನು ಉಪಯೋಗಿಸುತ್ತಿದ್ದರು. ಇವೆರಡ ಉಪಕರಣಗಳೂ ಸುಮಾರು 200 ವರ್ಷಗಳ ತನಕವೂ ಉಪಯೋಗದಲ್ಲಿದ್ದವು ಈ ಅವಧಿಯಲ್ಲಿ ಹಲವಾರು ಪ್ರಯೋಗಗಳು ನಡೆದು ಒಂದೇ ಸಲಕ್ಕೆ ಅನೇಕ ಕದಿರುಗಳಿಂದ ನೂಲುವ ಯಂತ್ರಗಳ ಉಪಜ್ಞೆ ಆಯಿತು. ಈ ಬಗೆಯ ಆಧುನಿಕ ನೂಲುವಿಕೆಯ ರೂಪವನ್ನು ನಿರೂಪಿಸಲು ಮೂಲತತ್ತ್ವಗಳನ್ನು ಶೋಧಿಸಿದವರಲ್ಲಿ ಹಾರ್‍ಗ್ರೀವ್ಸ್, ಕ್ರಾಮ್‍ಟನ್, ಆರ್ಕ್‍ರೈಟ್, ಪಾಲ್ ಎಂಬವರು ಮುಖ್ಯರು. 1764ರ ಸುಮಾರಿಗೆ ಹಾರ್‍ಗ್ರೀವ್ಸ್ 10ರಿಂದ 20 ಕದಿರುಗಳುಳ್ಳ ಸ್ಪಿನ್ನಿಂಗ್ ಜೆನ್ನಿ ಎಂಬ ಯಂತ್ರವನ್ನು ಉಪಜ್ಞಿಸಿದ.

ಚಿತ್ರ-5

ಹಾರ್‍ಗ್ರೀವ್ಸ್ ಸ್ಪಿನ್ನಿಂಗ್ ಜೆನ್ನಿ ಯಂತ್ರದಲ್ಲಿ ಕೊಡಿಗೆ ಕಂಡಿಕೆಯಿಂದ ಕದಿರಿನ ಮೇಲೆ ಹೇಗೆದಾರ ನೂಲಲ್ಪಟ್ಟು ಸುತ್ತಿಕೊಳ್ಳುವ ಕ್ರಮ ಇದೆ. 1770ರ ಸುಮಾರಿಗೆ ಉರುಳು ದಿಂಡುಗಳ ನೆರವಿನಿಂದ ಎಳೆಗಳನ್ನು ಎಳೆಯುವಿಕೆ ಹೆಚ್ಚಾಗಿ ಪ್ರಚಲಿತವಾಯಿತು. ಈ ಸೂತ್ರವನ್ನು ಬಳಸಿಕೊಂಡು ಕ್ರಾಮ್‍ಟನ್ನನು ಮ್ಯೂಲ್ ಯಂತ್ರವನ್ನು ಉಪಜ್ಞಿಸಿದ (ಚಿತ್ರ 2). ಇದೇ ಸುಮಾರಿಗೆ ಆಕ್‍ಋರೈಟ್ ಎಂಬ ವಿಜ್ಞಾನಿ ಸ್ಪಿನ್ನಿಂಗ್ ಜೆನ್ನಿ, ಉರುಳುದಿಂಡುಗಳಿಂದ ಎಳೆಯುವಿಕೆ ಮತ್ತು ಪ್ಲೈಯರಿನಿಂದ ಹುರಿ ಮಾಡುವಿಕೆ ಈ ಮೂರು ಸೂತ್ರಗಳನ್ನೂ ಒಳಗೊಂಡು, ಹತ್ತಿಯನ್ನು ನೂಲಲು ಉಪಯೋಗವಾಗುವ ಯಂತ್ರವೊಂದನ್ನು ಉಪಜ್ಞಿಸಿದ (ಚಿತ್ರ-3). ಇದು ನೀರಿನ ಶಕ್ತಿಯಿಂದ ಚಾಲೂ ಆಗುತತಿದ್ದುದರಿಂದ ಇದಕ್ಕೆ ನೀರಿನ ಚಕ್ರ ಎಂಬ ಹೆಸರು ಬಂತು. 17ನೇ ಶತಮಾನದಿಂದ ಇಂದಿನ ತನಕವೂ ನೂಲುವಿಕೆಯ ಈ ಮೂಲತತ್ತ್ವಗಳು ಬದಲಾಗದೇ ಮುಂದುವರಿಯುತ್ತಿವೆ. 

ತುಂಡಾದ ಎಳೆಗಳನ್ನು ಹೊಸೆದು ಉದ್ದ ದಾರದ ರೂಪಕ್ಕೆ ಪರಿವರ್ತಿಸುವ ಕ್ರಿಯೆಯೇ ನೂಲುವಿಕೆ ಎಂದಿರುವುದು ಸರಿಯಷ್ಟೇ. ಈಗ ಎಳೆಗಳನ್ನು ಬಟ್ಟೆಯಲ್ಲಿ ಹಾಗೆಯೇ ಉಪಯೋಗಿಸಲು ಮೂಲತಃ ಅವಕ್ಕೆ ಸಾಕಷ್ಟು ಉದ್ದವಿರುವುದಿಲ್ಲ. ಅಲ್ಲದೇ ಬಲವೂ ಸಾಲದಾಗಿರುತ್ತದೆ. ಆದ್ದರಿಂದ ಎಳೆಗಳನ್ನು ಅವುಗಳಲ್ಲೇ ಒಂದು ಸೇರ್ಪಡೆಯಾಗಿ ಎಳೆದು ಸೇರಿಸಿ ಹುರಿಮಾಡಿ ನೀಳವಾದ ಬಲವಾದ ಮತ್ತು ಒಂದೇ ಸಮವಾದ ತಂತುವಾಗಿ ರೂಪಿಸಬೇಕಾಗಿದೆ. ಇದೇ ನೂಲುವಿಕೆ (ಚಿತ್ರ-4). ಈ ರೀತಿ ಪರಿವರ್ತಿತವಾದ ವಸ್ತು ದಾರ ರೇಷ್ಮೆ ಮತ್ತು ಕೃತಕ ನೂಲನ್ನು ನೂಲುವಾಗ ನೂಲುವ ದ್ರಾವಣ ಅತ್ಯಂತ ಕಿರಿದಾದ ರಂಧ್ರಗಳ ಮೂಲಕ ಹೊರಹೊಮ್ಮಿ ಗಟ್ಟಿಮಾಡಲ್ಪಟ್ಟು ಅತಿ ಉದ್ದವಾದ ತಂತುಗಳಾಗಿ ಮಾರ್ಪಡುತ್ತದೆ. ಆಧುನಿಕ ಯಂತ್ರಗಳಲ್ಲಿ ಮೊದಲು  ಂ ಎಂಬ ಹತ್ತಿಯ ಮೂಟೆಯನ್ನು ಒಡೆದು  ಃ ಎಂಬ ಎಳೆಗಳ ಉಂಡೆಗಳಾಗಿ ಮಾಡುತ್ತಾರೆ. ಅನಂತರ ಈ ಉಂಡೆಗಳನ್ನು ಬಿಡಿಸಿ ಅಯಂಥ ದಿಂಡಾಗಿ ಸುತ್ತುತ್ತಾರೆ. ದಿಂಡಿನಲ್ಲಿರುವ ಬಿಡಿ ಎಳೆಗಳನ್ನು ಬಿಡಿ ಬಿಡಿಯಾಗಿ ಬಿಡಿಸಿ  ಆ ಯಲ್ಲಿ ತೋರಿಸಿರುವಂತ ದಪ್ಪ ಬತ್ತಿಯಾಗಿ ಪರಿವರ್ತಿಸುತ್ತಾರೆ. ಇದರಲ್ಲಿ ಎಳೆಗಳು ಸಾಧ್ಯವಾಗುವಷ್ಟು ನೇರವಾಗಿದ್ದು ಸುಮಾರಾದ ಹುರಿ ಇರುತ್ತದೆ., ಇದನ್ನು ಅನುಕ್ರಮವಾಗಿ    ಇ,ಈ,ಉ ಗಳಲ್ಲಿ ತೋರಿಸಿರುವಂತೆ ತೆಳುವಾಗಿ ಎಳೆದು ಕೊನೆಗೆ ಊಎಂಬ ನವುರಾದ ದಾರದ ರೂಪಕ್ಕೆ ನೂಲುತ್ತಾರೆ.

ನೂಲುವಿಕೆಯ ಮೂಲ ಪ್ರಕ್ರಿಯೆಗಳು: ನೂಲುವಿಕೆಯಲ್ಲಿ ಈ ಮುಂದಿನ ಮೂಲ ಪ್ರಕ್ರಿಯೆಗಳಿವೆ-ಬಿಡಿಸುವುದು ಮತ್ತು ಶುದ್ಧೀಕರಣ, ಮಿಶ್ರಣ ಮಾಡುವಿಕೆ, ಬಿಡಿಸಿ ಸುತ್ತುವಿಕೆ, ಬಿಡಿ ಎಳೆಗಳಾಗಿ ಬಿಡಿಸುವಿಕೆ, ಬಾಚುವಿಕೆ, ಎಳೆಗಳ ಜೋಡಣೆ ಮತ್ತು ಎಳೆಯುವಿಕೆ, ನವುರಾಗಿಸುವಿಕೆ (ರೋವಿಂಗ್), ನೂಲುವಿಕೆ.

ಮೇಲೆ ಸೂಚಿಸಿರುವ ಎಂಟು ಹಂತಗಳು ಎಳೆಗಳ ಗುಂಪನ್ನು ಅನುಕ್ರಮವಾಗಿ ನವುರಾದ ಮತ್ತು ಬಲವಾದ ದಾರವಾಗಿ ಪರಿವರ್ತಿಸಿ ಅದನ್ನು ಬಟ್ಟೆಯಾಗಿ ನೇಯಲು ಯೋಗ್ಯವಾಗಿ ಮಾಡುತ್ತವೆ. ಬೇರೆ ಬೇರೆ ಬಗೆಯ ಎಳೆಗಳಿಗೆ ಸ್ವಲ್ಪ ಹೆಚ್ಚು ಕಡಿಮೆಯಾದ ಕ್ರಮಗಳನ್ನು ಅನುಸರಿಸಿದಾಗ್ಗೂ ಮೂಲ ಹಂತಗಳು ಸಾಮಾನ್ಯವಾಗಿ ಒಂದೇ ಬಗೆಯವು. 

1. ಬಿಡಿಸುವಿಕೆ ಮತ್ತು ಶುದ್ಧೀಕರಣ: ಇದರಲ್ಲಿ ಕಚ್ಚಾ ಎಳೆಗಳುಳ್ಳ ಮೂಟೆಗಳನ್ನು ಒಡೆದು ಎಳೆಗಳ ಉಂಡೆಗಳನ್ನು ಬಿಡಿಸುತ್ತಾರೆ.

2. ಮಿಶ್ರಣ ಮಾಡುವಿಕೆ: ಬೇರೆ ಬೇರೆ ಉಪಯೋಗಗಳಿಗಾಗಿ ಅನೇಕ ಮೂಟೆಗಳಿಂದ ಬೇರೆ ಬೇರೆ ಬಗೆಯ ಎಳೆಗಳನ್ನು ಒಟ್ಟಿಗೆ ಮಿಶ್ರಣ ಮಾಡುತ್ತಾರೆ. ಹೀಗೆ ಎಳೆಗಳನ್ನು ಮಿಶ್ರ ಮಾಡುವುದಕ್ಕಾಗಿಯೇ ಬೇರೊಂದು ಮಿಶ್ರಣಯಂತ್ರ ಇರುವುದು.

3. ಬಿಡಿಸಿ ಸುತ್ತುವಿಕೆ: ಇಲ್ಲಿ ಎಳೆಗಳ ಉಂಡೆಗಳನ್ನು ಬಿಡಿಸಿ ಭಾರವಾದ ಮತ್ತು ಹಗುರವಾದ ಕಶ್ಮಲಗಳನ್ನು ತೆಗೆದು ಹಾಕಿ ಹತ್ತಿಯನ್ನು ದಿಂಡಿನಂತೆ ಸುತ್ತುತ್ತಾರೆ.

ಚಿತ್ರ-6

4. ಬಿಡಿ ಎಳೆಗಳಾಗಿ ಬಿಡಿಸುವುದು: ಎಳೆ ಬಿಡಿಸುವ ಯಂತ್ರಕೆಕ ಮೇಲೆ ತಯಾರಿಸಿದ ಹತ್ತಿಯ ದಿಂಡುಗಳನ್ನು ಒದಗಿಸುತ್ತಾರೆ, ಇಲ್ಲಿಂದ ಮುಂದೆ ಒಟ್ಟುಗೂಡಿದ ಎಳೆಗಳನ್ನು ನೇರಗೊಳಿಸುವ ಕ್ರಿಯೆ ಪ್ರಾರಂಭವಾಗುತ್ತದೆ. ಸುತ್ತುತ್ತಿರುವ ಸಿಲಿಂಡರುಗಳ ಮೇಲೆ ಎಳೆಯುವ ಕ್ರಿಯೆಯಿಂದ ಇದನ್ನು ಮಾಡುತ್ತಾರೆ. ಸಿಲಿಂಡರುಗಳಲ್ಲಿರುವ ತಂತಿದಂತಗಳು ಎಳೆಗಳನ್ನು ನೇರಗೊಳಿಸುತ್ತದೆ. ಈ ಯಂತ್ರದಿಂದ ಹೊರಬಂದ ಎಳೆಗಳು ದ್ಪಪವಾದ ಬತ್ತಿ ಅಥವಾ ಹಗ್ಗದ ರೂಪದಲ್ಲಿರುತ್ತವೆ.

5. ಬಾಚುವಿಕೆ: ಈ ಕ್ರಿಯೆಯನ್ನು ಅತ್ಯಂತ ನವುರಾದ ಎಳೆಗಳಿಗೆ ಮಾತ್ರ ಉಪಯೋಗಿಸುತ್ತಾರೆ. ಇಲ್ಲಿ ನಾಲ್ಕನೆಯ ಹಂತದ ಕ್ರಿಯೆಯೆ ಮುಂದುವರಿಯುವುದು. ಜೊತೆಗೆ ಬಾಚಿದ ಬತ್ತಿಯಲ್ಲಿ ಒಂದೇ ಉದ್ದ ಎಳೆಗಳು ಉಳಿದು ತುಂಡಾಗಿರುವ ಎಳೆಗಳು ತೆಗೆದು ಹಾಕಲ್ಪಡುತ್ತವೆ. ಈ ಕ್ರಿಯೆಗೆ ಉಪಯೋಗಿಸುವ ತಂತಿದಂತಗಳು ನವುರಾಗುತ್ತವೆ.

6. ಎಳೆಗಳ ಜೋಡಣೆ: ಇಲ್ಲಿ ಹಲವಾರು ದಪ್ಪ ಬತ್ತಿಗಳನ್ನು ಜೋಡಿಸಿ, ಎಳೆದು ಅವನ್ನು ಇನ್ನೂ ಉದ್ದವಾದ ಮತ್ತು ತೆಳುವಾದ ಹಗ್ಗದ ರೂಪಕ್ಕೆ ತರುತ್ತಾರೆ.

7. ನವುರಾಗಿಸುವಿಕೆ: ಇದು ನೂಲುವುದರ ತತ್‍ಕ್ಷಣದ ಪೂರ್ವಸಿದ್ಧತೆ. ಇಲ್ಲಿ ದಪ್ಪ ಬತ್ತಿಯನ್ನು ಹಂತ ಹಂತವಾಗಿ ಎಳೆದು ತೆಳುವಾದ ಬತ್ತಿಗಳನ್ನಾಗಿ ಮಾಡಿ ಸುಮಾರಾದ ಹುರಿಯನ್ನು ಕೊಡುತ್ತಾರೆ. ಇದಕ್ಕಾಗಿ ಸ್ಲಬ್ಬರ್, ಇಂಟರ್ ಮತ್ತು ರೋವರ್ ಎಂಬ ಅನುಕ್ರಮವಾದ ಮೂರು ಮೂರು ಯಂತ್ರಗಳು ಉಪಯೋಗ ಉಂಟು. ರೋವಿಂಗ್ ಯಂತ್ರದಿಂದ ಬರುವುದನ್ನು ತೆಳುಬತ್ತಿ ಎಂದು ಕರೆಯುತ್ತಾರೆ.

8. ನೂಲುವಿಕೆ: ಇದು ದಾರದ ತಯಾರಿಕೆಯಲ್ಲಿ ಕೊನೆಯ ಹಂತ. ರೋವಿಂಗ್ ಎಂಬ ಬತ್ತಿಯನ್ನು ತೆಳುವಾದ ಮತ್ತು ಬಲಯುತವಾದ ದಾರವಾಗಿ ಪರಿವರ್ತಿಸುವ ಕ್ರಿಯೆಗೆ ನೂಲುವಿಕೆ ಎಂದು ಹೆಸರು. ಇಲ್ಲಿ ಬತ್ತಿ ತೆಳ್ಳಗೆ ಎಳೆಯಲ್ಪಟ್ಟು ಹುರಿಯನ್ನು ಹೊಂದಿ ಗಟ್ಟಿಯಾದ ದಾರವಾಗಿ ಕಂಡಿಕೆಯ ಮೇಲೆ ಸುತ್ತಲ್ಪಡುತ್ತದೆ.
ಬಟ್ಟೆಯನ್ನು ತಾಯರಿಸಲು ಹೊಕ್ಕಿಗಾಗಿ ಉಪಯೋಗಿಸುವ ದಾರವನ್ನು ನೂಲುವ ಯಂತ್ರದಿಂದ ಬಂದಂತೆಯೇ ಉಪಯೋಗಿಸಲಾಗುವುದಾದರೂ ಹಾಸಿನ ದಾರಕ್ಕೆ ಇನ್ನೂ ಹೆಚ್ಚಿನ ಬಿಗಿತ ಬೇಕಾಗುವುದರಿಂದ ಅದನ್ನು ಇನ್ನೂ ಹೆಚ್ಚು ಬಲಯುತವನ್ನಾಗಿ ಮಾಡುವರು. ಇದಕ್ಕಾಗಿ ಎರಡು ಅಥವಾ ಹೆಚ್ಚಿಗೆ ದಾರಗಳನ್ನು ಸೇರಿಸಿ ಹುರಿ ಮಾಡಿ ಅನಂತರ ಕಂಡಿಕೆಗಳ ಮೇಲೆ ಸುತ್ತುತ್ತಾರೆ.

ನೂಲುವ ಯಂತ್ರಗಳ ವಿಧಗಳು: ಫ್ಲೆಯರ್ ನೂಲುವಿಕೆ. ಮ್ಯೂಲ್ ನೂಲುವಿಕೆ. ಟೊಪ್ಪಿಗೆ ನೂಲುವಿಕೆ. ಉಂಗುರ ನೂಲುವಿಕೆ ಎಂಬ ನಾಲ್ಕು ವಿಧಗಳಿವೆ.

ಫ್ಲೆಯರ್ ನೂಲುವಿಕೆ: ಬಹಳ ಇವುಗಳಲ್ಲಿ ನೂಲನ್ನು ತಯಾರಿಸುತ್ತಿದ್ದರು. ಆ ನೂಲುವ ಯಂತ್ರಗಳ ಕದಿರುಗಳು ಇಂದಿನ ರೋವಿಂಗ್ ಯಂತ್ರಗಳಲ್ಲಿಯ ಫ್ಲೈಯರ್‍ಗಳನ್ನು ಹೋಲುತ್ತಿದ್ದವು. ದಾರ ಮುಂದಿನ ಕೊಡುಗೆ ದಿಂಡಿನಿಂಧ ಫ್ಲೈಯರ್‍ನ ಮೇಲುತುದಿಗೆ ಎಳೆದು ತರಲ್ಪಡುತ್ತಿತ್ತು. ಮುಂದೆ ಈ ದಾರ ಫ್ಲೈಯರ್ ತಳದ ಒಂದು ಕಣ್ಣಿನ ಮುಖಾಂತರ ಫ್ಲೈಯರ್ ಸುತ್ತಲೂ ತರಲ್ಪಟ್ಟು ಕಂಡಿಕೆಯ ಮೇಲೆ ಸುತ್ತಲ್ಪಡುತ್ತಿತ್ತು. ಹೀಗೆ ತಯಾರಾದ ನೂಲು ನಯವಾಗಿಯೇ ಇರುತ್ತಿತ್ತು. ಫ್ಲೈಯರಿನ ವೇಗ ಮಿನಿಟಿಗೆ ಸುಮಾರು 3,000 ಸುತ್ತು ಮಾತ್ರ ಇದ್ದುದರಿಂದ ಇದರ ಉತ್ಪಾದನೆ ಕಡಿಮೆಯಾಗಿತ್ತು.
ಮ್ಯೂಲ್ ನೂಲುವಿಕೆ: ಇದರಲ್ಲಿ ಕಂಡಿಕೆಗೆ ಮುಕ್ತ ಚಲನೆ ಇರುವುದರಿಂದ ಉತ್ಪಾದನೆ ಹೆಚ್ಚಿಸಲು ಸಾಧ್ಯವಾಗಿದೆ. ನೂಲುವಿಕೆಯ ಕ್ರಿಯೆ ಮೂರು ಹಂತಗಳಲ್ಲಿ ನಡೆಯಬೇಕಾಗಿರುವುದರಿಂದ ಕಾರ್ಯ ಅಖಂಡವಲ್ಲ. (i) ಎಳೆಗಳನ್ನು ದಾರದ ರೂಪಕ್ಕೆ ಎಳೆಯುವುದು. (ii) ಹೀಗೆ ಎಳೆದ ದಾರವನ್ನು ಹುರಿಮಾಡುವುದು. (iii) ಹುರಿ ಮಾಡಿದ ದಾರವನ್ನು ಸುತ್ತುವುದು. ಒಂದು ಮತ್ತು ಎರಡನೆಯ ಕ್ರಿಯೆಗಳು ಪ್ರಾರಂಭದಲ್ಲೂ ಮೂರನೆಯ ಕ್ರಿಯೆ ಅನಂತರವೂ ನಡೆಯುವುದರಿಂದ ಮ್ಯೂಲ್‍ನ ಕಾರ್ಯ ಅಖಂಡವಲ್ಲ.  ನೂಲಿನಲ್ಲಿ ಅಂಗುಲಕ್ಕೆ ಹುರಿ ಸಂಖ್ಯೆ ಕಡಿಮೆಯಾದಷ್ಟೂ ಅದು ನವುರಾಗುತ್ತದೆ. 
ಟೊಪ್ಪಿಗೆ ನೂಲುವಿಕೆ: ಇದರಲ್ಲಿ ಮೂರು ಕ್ರಿಯೆಗಳೂ ಅಖಂಡವಾಗಿರುವುವು. ಇಲ್ಲಿ ಫ್ಲೈಯರಿನ ಸ್ಥಾನದಲ್ಲಿ ಒಂದು ಟೊಪ್ಪಿಗೆ ಉಂಟು. ಕಂಡಿಕೆಯ ಪಟ್ಟಿಯಿಂದ ಕಂಡಿಕೆ ಚಲಿಸುತ್ತದೆ (ಚಿತ್ರ-5). ಅಲ್ಲದೇ ಅದು ತಲೆಕೆಳಗಾದ ಟೊಪ್ಪಿಗೆಯಲ್ಲಿಯೇ ಮೇಲೆ ಕೆಳಗೆ ಚಲಿಸುತ್ತದೆ. ದಾರ ಕೊಡಿಗೆ ದಿಂಡಿನಿಂದ ಹೊರಟು ಟೊಪ್ಪಿಗೆಯ ಕೆಳ ಅಂಚಿಗೆ ಎಳೆಯಲ್ಪಡುತ್ತದೆ. ಇದರಲ್ಲಿ ಕಂಡಿಕೆಯೇ ಚಲಿಸುವುದರಿಂದ ಸದಾ ದಾರದಲ್ಲಿ ಸ್ವಲ್ಪ ಬಿಗಿ ಇರುತ್ತದೆ.  ಈ ಯಂತ್ರದಲ್ಲಿ ಸಾಧಾರಣವಾಗಿ ನವುರು ಉಣ್ಣೆಯ (ವಸ್ರ್ಟೆಡ್) ದಾರವನ್ನು ನೂಲುತ್ತಾರೆ. 

ಉಂಗುರ ನೂಲುವಿಕೆ: ಇದು ಅತ್ಯಾಧುನಿಕವಾಗಿ ರೂಪಿಸಿರುವ ಯಂತ್ರ (ಚಿತ್ರ-6). ಇದರಲ್ಲಿ ಕದರಿನ ವೇಗ ಅತಿ ಹೆಚ್ಚಾಗಿರುವುದರಿಂದಲೂ (ಮಿನಿಟಿಗೆ ಸುಮಾರು 1000 ಸುತ್ತುಗಳು) ಕ್ರಿಯೆಗಳು ಅಖಂಡವಾಗಿರುವುದರಿಂದಲೂ ಸಹಜವಾಗಿ ಉತ್ಪಾದನೆ ಹೆಚ್ಚಾಗಿರುತ್ತದೆ. ದಾರಕ್ಕೆ ಹುರಿಯನ್ನು ಕೊಡಲು ಸುತ್ತುವ ಉಂಗುರವನ್ನು ಉಪಯೋಗಿಸುವುದರಿಂದ ದಾರಕ್ಕೆ ಇದರಿಂದ ಸ್ವಲ್ಪ ಪ್ರಯಾಸವಾಗುತ್ತದೆ; ಮತ್ತು ದಾರದ ವಿಸ್ತರಣಶೀಲತೆ ಸ್ವಲ್ಪಮಟ್ಟಿಗೆ ಕುಂಠಿತವಾಗುತ್ತದೆ. ದಾರ ಎಳೆಯುವ ದಿಂಡುಗಳಲ್ಲಿ ಎಳೆಯಲ್ಪಟ್ಟು ಲ್ಯಾಪೆಟ್ ಮತ್ತು ಸುತ್ತುವ ಉಂಗುರಗಳ ಮೂಲಕವಾಗಿ ಕಂಡಿಕೆಯ ಮೇಲೆ ಸುತ್ತಲ್ಪಡುವುದನ್ನು ಚಿತ್ರದಲ್ಲಿ ಗಮನಿಸಬಹುದು. ಕದಿರು ಮತ್ತು ಸುತ್ತುವ ಉಂಗುರಗಳ ವೇಗದ ವ್ಯತ್ಯಾಸದ ಕಾರಣದಿಂದಲೇ ದಾರ ಕಂಡಿಕೆಯ ಮೇಲೆ ಸುತ್ತಲ್ಪಡುತ್ತದೆ. ಉಂಗುರ ನೂಲುವಿಕೆಯ ನವೀನತೆಯೂ ನಮೂನೆಗಳ ವೈವಿದ್ಯವೂ ಇದನ್ನು ಶತಮಾನದ ಅತ್ಯಂತ ಉಪಯುಕ್ತ ಯಂತ್ರವನ್ನಾಗಿಸಿದೆ.
(ಕೆ.ಬಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ